ಜುರ
ಪೂರ್ವ ಫ್ರಾನ್ಸಿನ ಒಂದು ಡಿಪಾರ್ಟ್‍ಮೆಂಟ್ (ಆಡಳಿತ ವಿಭಾಗ). ಲೋನ್ ಲ ಸೋನ್ಯೆ ಇದರ ಆಡಳಿತ ಕೇಂದ್ರ. ವಿಸ್ತೀರ್ಣ 1,934 ಚ.ಮೈ. ಜನಸಂಖ್ಯೆ 2,33,547 (1968).

ವಿಭಾಗದ ಪೂರ್ವಭಾಗದಲ್ಲಿ ಜುರ ಪರ್ವತಗಳು ಇವೆ. ಆನ್ ಮತ್ತು ಡೂ ಇಲ್ಲಿಯ ಮುಖ್ಯ ನದಿಗಳು. ವಿಭಾಗದ ಬಹುಭಾಗ ಪರ್ವತಮಯವಾದ ಎತ್ತರದ ಭೂಮಿ. ಪೂರ್ವದ ಬೆಟ್ಟಪ್ರದೇಶಗಳಲ್ಲಿ ವಿಸ್ತಾರವಾದ ಕಾಡುಗಳಿವೆ. ಎತ್ತರ ಪ್ರದೇಶಗಳಲ್ಲಿ ಶಂಕುಪರ್ಣಿ ಮರಗಳೂ ತಗ್ಗು ಪ್ರದೇಶಗಳಲ್ಲಿ ಪರ್ಣಪಾತಿ ಮರಗಳೂ (ಹೆಚ್ಚಾಗಿ ಬೀಚ್) ಇವೆ. ಜುರ ಪರ್ವತ ಪ್ರದೇಶದಿಂದ ಪಶ್ಚಿಮಕ್ಕೆ ಇಳಿಜಾರು ಹುಲ್ಲುಗಾವಲು ಪ್ರದೇಶಗಳಿವೆ. ಬೆಟ್ಟಗಳ ಮಧ್ಯೆ ಅಲ್ಲಲ್ಲಿ ಸರೋವರಗಳಿವೆ. ಈ ಅನುಕೂಲಗಳಿಂದಾಗಿ ಹೈನು ಉದ್ಯಮ ಇಲ್ಲಿ ಪ್ರಮುಖವಾಗಿದೆ. ಕುದುರೆಗಳನ್ನೂ ಸಾಕುತ್ತಾರೆ.

ಗೋದಿ, ಮೆಕ್ಕೆಜೋಳ ಮತ್ತು ಬಾರ್ಲಿ ಇಲ್ಲಿಯ ಮುಖ್ಯ ಬೆಳೆಗಳು. ಹೈನು ಉದ್ಯಮದಿಂದ ಹೆಚ್ಚಾಗಿ ತಯಾರಾಗುವ ಪದಾರ್ಥವೆಂದರೆ ಚೀಸ್. ಇಲ್ಲಿಯ ವಾಯುಗುಣ ಬಹಳ ತಂಪು. ಉಷ್ಣತೆಯಲ್ಲಿ ಥಟ್ಟನೆ ವ್ಯತ್ಯಾಸಗಳಾಗುವುದುಂಟು. ಫ್ರಾನ್ಸಿನ ಇತರ ಭಾಗಗಳಿಗಿಂತ ಇಲ್ಲಿ ಮಳೆಯೂ ಹೆಚ್ಚು.

ಇಲ್ಲಿ ಅನೇಕ ಸಣ್ಣ ಗಾತ್ರದ ಕೈಗಾರಿಕೆಗಳುಂಟು. ಲೋಹ ಮರ ಹಾಗೂ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆಯ ಕಾರ್ಖಾನೆಗಳಿವೆ. ಕನ್ನಡಕಗಳ ತಯಾರಿಕೆಗೂ ಇದು ಹೆಸರಾಗಿದೆ. ಆಹಾರವಸ್ತು ಮತ್ತು ಗಡಿಯಾರ ತಯಾರಿಸುವ ಕೈಗಾರಿಕೆಗಳು ಕೆಲವೆಡೆ ಇವೆ.

ಲೋನ್ ಲ ಸೋನ್ಯೆ (18,769), ಡೋಲ್ (27,188), ಸೇನ್ ಕ್ಲೋಡ್ (12,486)-ಇಲ್ಲಿಯ ಪ್ರಮುಖ ಪಟ್ಟಣಗಳು. ಡೋಲ್ ಮತ್ತು ಸೇನ್ ಕ್ಲೋಡ್‍ಗಳಲ್ಲಿ 15-16ನೆಯ ಶತಮಾನಗಳ ಚರ್ಚುಗಳಿವೆ. ಇವೆರಡು ಪಟ್ಟಣಗಳಲ್ಲೂ ರೋಮನರ ಕಾಲದ ಅವಶೇಷಗಳುಂಟು. ಸೇನ್ ಕ್ಲೋಡ್ ವಜ್ರದ ಕಂಡರಣೆಗೆ ಹೆಸರಾಗಿದೆ. ಡೋಲ್ ಪ್ರಸಿದ್ಧ ವಿಜ್ಞಾನಿ ಲೂಯಿ ಪಾಸ್ತರನ ಹುಟ್ಟೂರು.
(ಡಿ.ಎಸ್.ಜೆ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ